ಮಂಗಳವಾರ, ಅಕ್ಟೋಬರ್ 7, 2014

ಪ್ರಜಾವಾಣಿ ಕರ್ನಾಟಕ ದರ್ಶನ
ಹೆಜ್ಜೆ ಹೆಜ್ಜೆಗೂ ಜಲಕನ್ಯೆ
Tue, 10/07/2014
ಬಿಸಿಲಿನಲ್ಲಿ ಬಸವಳಿದ ನೀರ ಸೆಲೆಗಳಿಗೆ ಮಳೆ ಬರುತ್ತಿದ್ದಂತೆ ಜೀವ ತುಂಬುತ್ತದೆ. ಪ್ರಕೃತಿಯ ಅಂದ ಉಮ್ಮಳಿಸುತ್ತದೆ. ಪಶ್ಚಿಮ ಘಟ್ಟದ ವರ್ಷಧಾರೆ ಹಿತ ನೀಡಿದರೆ, ಬಯಲು ಸೀಮೆಯದ್ದು ಮತ್ತೂ ಸೌಂದರ್ಯ. ಮೊಗೆದಷ್ಟೂ ಸಂತೋಷ ತುಂಬಿಕೊಡುವ, ಮಳೆರಾಯನ ಹೆಜ್ಜೆಗಳಂತಿರುವ ಜಲಪಾತಗಳನ್ನು ಕಣ್ತುಂಬಿಕೊಳ್ಳಲು ಇದು ಸಕಾಲ
ಮಳೆಗಾಲ ಶುರುವಾದರೆ ಸಾಕು, ಹಸಿರು ಮೂಡಿ, ಹೊಸ ಸೊಬಗು ಪಡೆಯುವ ಪಶ್ಚಿಮಘಟ್ಟದ ಧರೆ, ಮಳೆಯ ಸಂಭ್ರಮದೊಳಗೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಲೆನಾಡ ಸೆರಗೊಳಗಿನ ಪ್ರವಾಸ ಮಳೆಯಲಿ, ಜೊತೆಯಲಿ ಎನಿಸೋದು ಖಂಡಿತ.
ಅಂದಹಾಗೆ, ಮಲೆನಾಡ ಭುವಿಗೆ ಮಳೆರಾಯ ಸಣ್ಣ ಹನಿಯಿಂದ ಹಿಡಿದು, ಆಕಾಶಕ್ಕೆ ತೂತು ಬಿದ್ದಿದೆಯೆನೋ ಎನ್ನುವಷ್ಟರ ಗಾತ್ರದಲ್ಲಿ ಬೀಳುತ್ತಾನೆ. ಮಳೆಯ ಹನಿಗಳು ಕೆಲವೊಮ್ಮೆ ರೋಮಾಂಚನ ಮೂಡಿಸಿದರೆ, ಇನ್ನೂ ಕೆಲವೊಮ್ಮೆ ಸುರಿಯುವ ಅತಿಯಾದ ಮಳೆ, ಅನಾಹುತಗಳಿಗೂ ಆಹ್ವಾನ ನೀಡುತ್ತದೆ. ಎಷ್ಟೇ ಆಗಲೀ ಇವೆಲ್ಲ ಪ್ರಕೃತಿ ನಿಯಮವಲ್ಲವೇ...
ಎಲ್ಲೋ ಬೀಳುವ ಮಳೆಯ ನೀರು, ಇನ್ನೆಲ್ಲೋ ನದಿಯಾಗಿ ಹರಿದು, ಸಾಗರ ಸೇರುವ ಪರಿ, ಕೆಲವೊಂದು ಕಡೆ ಜಲಪಾತಗಳನ್ನು ಸೃಷ್ಟಿಸುವ ರೀತಿ ನಿಜಕ್ಕೂ ವಿಸ್ಮಯ. ವರ್ಷಋತುವಿನಲ್ಲಿ ಬಾಬಾಬುಡನ್ಗಿರಿ, ಮುಳ್ಳಯ್ಯನಗಿರಿ ಶ್ರೇಣಿ, ಕೊಟ್ಟಿಗೆಹಾರದ ಚಾರ್ಮಾಡಿ ಘಾಟ್, ಕುದುರೆಮುಖದ ಆಸುಪಾಸು, ಶೃಂಗೇರಿ, ಕೊಪ್ಪ ತಾಲ್ಲೂಕುಗಳಲ್ಲಿ ಸಂಚರಿಸುವುದೇ ಮಸ್ತ್ ಮಜಾ.
ಮಳೆ ಬಂತೆಂದರೆ, ನೆಲದೊಳಗೆ ಹುದುಗಿ ಕುಳಿತ ಸಸ್ಯಗಳು ತಲೆ ಎತ್ತುತ್ತವೆನೆಲ ಸಂಪಿಗೆ, ಡೇರೆ, ಗೌರಿ ಹೂ, ಗೋಪುರದ ಹೂವುಗಳ ಜೊತೆ ಕೆಂಪು, ಹಳದಿ ಬಣ್ಣದ ಗೌರಿ ಹೂವು ಬೇಲಿ ಸಂದಿನಿಂದ ಹೊರಬಂದು ಇಣುಕಿ ನೋಡುತ್ತದೆ. ಅಲ್ಲಲ್ಲಿ ಬೆಳೆಯುವ ಅಣಬೆಗಳು ಕಣ್ಣಿಗೆ ಮುದ ನೀಡುತ್ತವೆ. ಇಲ್ಲಿನ ಹಳ್ಳಗಳಲ್ಲಿ ಏಡಿ, ಮೀನುಗಳು ಕುಣಿದಾಡುತ್ತವೆ.
ಕೊಟ್ಟಿಗೆ ಹಾರಕ್ಕೆ ಪಯಣ...
ಚಿಕ್ಕಮಗಳೂರಿನ ಕೊಟ್ಟಿಗೆ ಹಾರದಿಂದ ಧರ್ಮಸ್ಥಳ ಕಡೆಗೆ ಪ್ರವಾಸ ಬೆಳೆಸುವಾಗ ಮಳೆ ಸಿಕ್ಕರಂತೂ ರೋಮಾಂಚನ. ಕಣ್ ಮುಂದೆ ಹಾದು ಹೋಗುವ ಮುಗಿಲು ಚುಂಬಿಸುವ ಪರ್ವತ ಶ್ರೇಣಿಗಳು, ಎಡೆಎಡೆಗೂ ಸಿಗುವ ಹಾಲ ನೊರೆಯಂತೆ ಅಲ್ಲಲ್ಲಿ ಧುಮುಕುವ ಜಲಧಾರೆಗಳ ಸೊಬಗು ಮನಮೋಹಕ.
ಇಲ್ಲಿನ ಧರೆಯಲ್ಲಿ, ಬೆಟ್ಟ ಗುಡ್ಡ, ಗಿರಿಶೃಂಗಗಳ ರಾಶಿಯಲ್ಲಿ ಪ್ರವಾಸಿಗರಿಗೆ ಏನೆಂದರೂ ಐದು ಕಿಲೋಮಿಟರ್ ಅಂತರದಲ್ಲಿ, 10ಕ್ಕೂ ಅಧಿಕ ಜಲಕನ್ಯೆಯರನ್ನು ನೋಡುವ ದರ್ಶನ ಭಾಗ್ಯ ದೊರೆಯುತ್ತದೆ. ಒಂದೊಂದು ಜಲಧಾರೆಗಳೂ ಒಂದಕ್ಕಿಂತ ಒಂದು ಬಲು ಚೆಲುವು. ಜುಳು ಜುಳು ನಾದ ಗೈಯ್ಯುತ್ತಾ, ಬೆಟ್ಟದ ಹಸಿರಿನೊಳಗಿನಿಂದ ವೈಯಾರ ಮಾಡುತ್ತಾ ಧುಮ್ಮಿಕ್ಕುವ ಇವು, ಚಿಕ್ಕಮಗಳೂರಿನ ನಿಮ್ಮ ಪ್ರವಾಸದಲ್ಲಿ ಸದಾ ಜೊತೆಯಾಗುವ ಸಂಗಾತಿ.
ಇನ್ನೂ ನೀವು ಇಲ್ಲಿನ ಅಲೆಖಾನ್ ಹೊರಟ್ಟಿ ಮಾರ್ಗವಾಗಿ ಹೋಗುವ ತಿರುವಿನಲ್ಲಿ ಸಿಗುವ ಜಲಧಾರೆ ವರ್ಷಪೂರ್ತಿ ಹರಿದರೆ, ಇಲ್ಲಿ ಹರಿಯುವ ಇತರೆ ಜಲಪಾತಗಳು, ಮಳೆಗಾಲದಲ್ಲಿ ಮಾತ್ರ ಹರಿದು, ಮಾಯವಾಗುತ್ತವೆ.
ಕಳಸದ ಅನುಭವ
ಚಿಕ್ಕಮಗಳೂರಿನಿಂದ ಕಳಸ ಮಾರ್ಗವಾಗಿ ಹೊರಟರೆ ಪ್ರವಾಸ ಮತ್ತಷ್ಟು ಹೊಸ ಅನುಭವ ನೀಡುತ್ತದೆ. ಇಲ್ಲಿ ಸಿಗುವ ಕಾಫಿ ತೋಟಗಳ ಸಾಲು ಸಾಲು ಚಿಲಿಪಿಲಿ ಗುಟ್ಟುವ ಅತಿ ವಿರಳ ಬಾನಾಡಿ ಹಕ್ಕಿಗಳು, ಉಕ್ಕಿ ಸೊಕ್ಕಿ  ಹರಿಯುವ ತೊರೆಗಳು ಮುದ ನೀಡುತ್ತವೆ.
ಮಳೆಗಾಲದಲ್ಲಿ ತುಂಬಿ ಉಕ್ಕುವ ಜೀವ ನದಿ ಭದ್ರೆಯ ಒನಪು ವೈಯ್ಯಾರ ವರ್ಣನೆಗೆ ನಿಲುಕದ್ದು. ಸೌಂದರ್ಯ ರಾಶಿಯನ್ನು ಸವಿದು ಕುದುರೆಮುಖದತ್ತ ಸಾಗಿದರೆ, ಎಳೆನೀರು ಎಂಬ ಗ್ರಾಮ ಎದುರಾಗುತ್ತದೆ. ಗ್ರಾಮ ಸಮೀಪಿಸುತ್ತಿದ್ದಂತೆ ಎದುರಾಗುತ್ತಾರೆ ಬಳಕುವ ಜಲಕನ್ಯೆಯರು!
ಚಿಕ್ಕಮಗಳೂರು -ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶದಲ್ಲಿ ಬರುವ ಸೊಗಸಾದ ಜಲಪಾತ, ಒಂದು ಸಾವಿರಕ್ಕೂ ಅಧಿಕ ಅಡಿಗಳ ಎತ್ತರದಿಂದ ಎರಡು ಹಂತವಾಗಿ ಹರಿಯುತ್ತದೆ. ಹೊತ್ತು ಮುಳುಗಿದರೂ ಇಲ್ಲಿಂದ ಹೊರಡಲು ಮನಸ್ಸೇ ಆಗುವುದಿಲ್ಲ.
ಇದರ ಗುಂಗಿನಲ್ಲಿ ಸುಮಾರು ಐದು ಕಿಲೋಮೀಟರ್ ದೂರ ಕ್ರಮಿಸಿದರೆ, ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕ ಪಡೆಯಲು ಸಾಧ್ಯವಿದ್ದರೂ ಪರಿಸರ ರಕ್ಷಣೆ ನೆಪದಿಂದ ಹಾಳಾದ ರಸ್ತೆಯಲ್ಲೇ ಜಲಪಾತ ಸೃಷ್ಟಿಸಿರುವಯಳನೀರ ಫಾಲ್ಸ್ಕಣ್ಣು ತುಂಬಿಕೊಳ್ಳಬಹುದು. ಜಲಪಾತ ಸುಮಾರು 120 ಕಿ.ಮೀ ದೂರದಷ್ಟು ಸುತ್ತಿ ಬಳಸಿ ತಾಲ್ಲೂಕು ಕೇಂದ್ರ ಬೆಳ್ತಂಗಡಿಯನ್ನು ಸೇರುತ್ತದೆ.
ನಮ್ಮೂರಿನ ಮುನ್ನಾರ್
ಅಲ್ಲಿಂದ ಕುದುರೆಮುಖ ಶ್ರೇಣಿಯತ್ತ ಕಾಲಿಟ್ಟರೆ, ಗಣಿಗಾರಿಕೆ ನಿಂತು, ಸಂರಕ್ಷಿತಾರಣ್ಯವಾಗಿ ಮಾರ್ಪಟ್ಟಿರುವ ಇಲ್ಲಿನ ತಂಪು ಹಸಿರ ಸಿರಿಯನ್ನು ಕಾಣಬಹುದು. ಇಂತಹ ಸೌಂದರ್ಯವನ್ನು ದೇವರ ನಾಡೆಂದೇ ಕರೆಯುವ ಕೇರಳದಲ್ಲಿ ಸಾಕಷ್ಟು ಕಡೆ ಕಾಣಬಹುದಾದರೂ, ಸ್ಥಳವನ್ನು ನಮ್ಮೂರಿನ ಮುನ್ನಾರ್ ಎನ್ನಬಹುದು.
ಮುನ್ನಾರ್‌’ ನೋಡಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯತ್ತ ಹೆಜ್ಜೆ ಹಾಕಿದರೆ, ಚಹಾ ತೋಟ, ಭದ್ರಾ ನದಿ, ಹಸಿರ ಸಿರಿ ಮತ್ತೆ ಕಣ್ಣು ತುಂಬುತ್ತದೆ. ಹಾಗೆಯೇ ಮುಂದೆ ಸಾಗಿದರೆ ದಾರಿಯ ಅಂಚಿನಲ್ಲೇಕಡಾಂಬಿಎಂಬ ಸುಂದರ ಜಲಪಾತ ಸ್ವಾಗತವೀಯುತ್ತವೆ.
ದಟ್ಟ ಕಾಡಿನ ಮಧ್ಯದಿಂದ ಧುಮ್ಮಿಕ್ಕಿ ಬೀಳುವ ನೀರು, ನೀರಿನೊಂದಿಗೆ ಜೊತೆಗೂಡುವ ಜೀರುಂಡೆಗಳ ಸದ್ದು, ಜಲಪಾತದ ಪಕ್ಕದಲ್ಲಿಯೇ ಅತ್ತಿಂದಿತ್ತ ಸಾಗುವ ವಾಹನಗಳ ಭರಾಟೆಯ ನಡುವೆಯೂ ಜಲಧಾರೆ ಮನಸ್ಸನ್ನು ಹಗುರಗೊಳಿಸುತ್ತದೆ.
ಚಾರಣಿಗರ ಸ್ವರ್ಗ
ನೀವೇನಾದರೂ ಸಾಹಸಿ ಚಾರಣಿಗರಾಗಿ, ಟ್ರೆಕ್ಕಿಂಗ್ ಪ್ರಿಯರಾಗಿದ್ದರೆ, ಬಾಳೆ ಹೊನ್ನೂರಿನಿಂದ ಕಳಸಕ್ಕೆ ಹೋಗುವ ಮಾರ್ಗ ಮಧ್ಯೆ ಸಿಗುವ ಬಾಳೆಹೊಳೆಯಲ್ಲಿ ಜಲಸಾಹಸ ಕ್ರೀಡೆಯನ್ನು ಕೈಗೊಳ್ಳಬಹುದು.
ಕ್ರೀಡೆಗಳನ್ನು ಖಾಸಗೀ ಸಂಸ್ಥೆ ನಡೆಸುತ್ತಿದ್ದು, ಭೋರ್ಗರೆದು ಹರಿಯುವ ಭದ್ರೆಯಲ್ಲಿ ಸುಮಾರು 8 ಕಿ.ಮೀ ದೂರದವರೆಗೂ ಗಾಳಿ ತುಂಬಿದ ದೋಣಿಯಲ್ಲಿ ನೀವೇ ಹುಟ್ಟು ಹಾಯಿಸುತ್ತಾ, ಭದ್ರೆಯ ಒಡಲನ್ನ ಸೀಳಿಕೊಂಡು ಮುಂದೆ ಸಾಗಬಹುದುಇಷ್ಟೇ ಅಲ್ಲ. ರೈಲು ಮಾರ್ಗವಾಗಿ ಚಿಕ್ಕಮಗಳೂರಿಗೆ ತೆರಳಿದಾಗ ಕಡೂರಿನಲ್ಲಿ ಇಳಿದು, ಸಕರಾಯಪಟ್ಟಣ ಮಾರ್ಗವಾಗಿ ತೆರಳುವಾಗ ಸಕರಾಯಪಟ್ಟಣದಿಂದ ಕೇವಲ 5 ಕಿ.ಲೋ ಮೀಟರ್ ದೂರದಲ್ಲಿರುವ ಅಯ್ಯನ ಕೆರೆ ಎಂಬ ಐತಿಹಾತಿಕ ಕೆರೆಯನ್ನ ನೋಡಬಹುದು. ಇದು ಚಿಕ್ಕಮಗಳೂರಿನಿಂದ ನೋಡಲು ಹೊರಟರೆ 18 ಕಿ.ಲೋ.ಮೀಟರ್ ದೂರವಾಗುತ್ತದೆ.
ಇದಾದ ನಂತರ ಸುಮಾರು 45 ಕಿ.ಲೋ ಮೀಟರ್ ದೂರದಲ್ಲಿನ ಬಾಳೆಹೊನ್ನೂರು ಮಠ, ಬಾಬಾಬುಡಯ್ಯನ ಗಿರಿಯಲ್ಲಿರುವ ದತ್ತಾತ್ರೇಯ ಪೀಠ, ಹೊಯ್ಸಳರ ಕಾಲದ ಐತಿಹಾಸಿಕ ಬಲ್ಲಾಳರಾಯನ ದುರ್ಗ, ಬೆಲವಾಡಿ ದೇವಸ್ಥಾನ, ತರೀಕೆರೆಯತ್ತ ತೆರಳಿದರೆ ಸುಮಾರು 18 ಕಿಲೋ ಮೀಟರ್ ದೂರದಲ್ಲಿರುವ ಭದ್ರಾ ಅಭಯಾರಣ್ಯ ನೋಡಬಹುದು. ಇವಲ್ಲದೇ ಹೊರನಾಡು, ಕಳಸ, ಕೆಮ್ಮಣ್ಣುಗುಂಡಿ, ಚಿಕ್ಕಮಗಳೂರು ಸಮೀಪವೇ ಇರುವ ಸುಂದರ ಪಾರ್ಕ್ ಆದಂತ ರತ್ನಗಿರಿ ಬೋರೆಯಲ್ಲಿ ಮಕ್ಕಳ ರೈಲನ್ನೇರಿ ಸಂಭ್ರಮಿಸಿ. ಇನ್ನೂ ಚಿಕ್ಕಮಗಳೂರು ಬೇಲೂರು ಮಾರ್ಗದಲ್ಲಿ ಸಿಗುವ ಹಿರೇಮಗಳೂರು ಕೋದಂಡರಾಮ ಸ್ವಾಮಿ ದೇವಸ್ಥಾನವನ್ನು ನೋಡಬಹುದು. ‘ಮಳೆಯ ಪ್ರವಾಸಇಷ್ಟೆಲ್ಲ ಸಂತಸದ ಕ್ಷಣಗಳನ್ನು ಹುಟ್ಟು ಹಾಕಿದರೂ, ಅಲ್ಲಲ್ಲಿ ನಿಮಗೆ ಅರಿವಿರದೆ ಕಾಟ ಕೊಡುವ ಉಂಬಳಗಳ ಬಗ್ಗೆ ಎಚ್ಚರಿಕೆ ವಹಿಸುವುದು ಒಳಿತು.